ಶನಿವಾರ, ಮಾರ್ಚ್ 8, 2014

ಮೂಗುತಿ ಸುಂದರಿ ಭಾಗ-2

ಮೂಗುತಿ ಸುಂದರಿ ಭಾಗ-1 ಇಲ್ಲಿದೆ.http://vasukihegde.blogspot.in/2014/03/blog-post.html



ಮೂಗುತಿ ಸುಂದರಿ ಭಾಗ-2 

ವೈಶಾಲಿ ನಾನು ನಿನ್ನ ಹತ್ರ ಎಂತೋ ಹೇಳಕ್ಕಾಗಿತ್ತು”
“ಹಂ ಹೇಳು “
“ನಂಗೆ ಮನೇಲಿ ಗಂಡು ಹುಡುಕ್ತಾ ಇದ್ದ “
“ವಾವ್ ಹೌದನೇ ... ಮಸ್ತಲೆ..”
“ಆದರೆ ನಾನು ರವಿನಾ ಪ್ರೀತಿಸ್ತಾ ಇದ್ದಿ.... <3 ನಂಗೆ ಅವನ ಕಂಡರೆ ಇಷ್ಟಾ”
“ಅಯ್ಯೋ ಹೌದನೇ ಹೇಳಿದ್ದೇ ಇಲ್ಲ್ಯಲೆ ಮತೆ “
ಒಳಗೊಳಗೇ ಉರಿಯುತ್ತಿದ್ದ ಬೆಂಕಿಯನ್ನು ಆರಿಸಲು ಪ್ರಯತ್ನಿಸುತ್ತಾ ವೈಶಾಲಿ ಕವಿತಾಳಿಗೆ ಹೇಳಿದ್ದಳು. ನಂತರ ರವಿಗೆ ಎಲ್ಲ ವರದಿ ಒಪ್ಪಿಸಿದ್ದಳು.

ರವಿ ಕವಿತಾಳನ್ನು ಯಾವತ್ತೂ ಆ ದೃಷ್ಟಿಯಿಂದ ನೋಡಿದವನೆ ಅಲ್ಲ.ಮುಂದಿನ ಗುರುವಾರ ಕವನ ತೆಗೆದುಕೊಂಡು ಹೋಗಲು ಬರದೇ ಇದ್ದಾಗಲೇ ಅನುಮಾನದ ವಾಸನೆ ಹೊಡೆದಿದ್ದು.
“ವೈಶೂ ರವಿ ಎಂತಕ್ಕೆ ಬಂಜನೆ ಇಲ್ಲ್ಯೆ ??”
“ನಂಗೂ ಗೊತ್ತಿಲ್ಲೆ.. ನಾನು ಅವನ್ನ ನೋಡದೇ ಸುಮಾರು ದಿನ ಆತು “
ಕಡ್ಡಿ ಎತ್ತಿಟ್ಟಂತೆ ಸುಳ್ಳು ಹೇಳಿದ್ದಳು ವೈಶಾಲಿ. ಅಂದು ಬಾರದ ರವಿ ಮತ್ತೆಂದೂ ಬರಲೇ ಇಲ್ಲ. Whatssapp , facebook ನಲ್ಲೂ ಉತ್ತರವಿಲ್ಲ. ಒಂದೆರಡು ಸಲ ಕಾಲೇಜ್ ನಲ್ಲಿ ಸಿಕ್ಕಾಗಲೂ ಸುಮ್ಮನೆ ನಕ್ಕು ಸರಸರನೆ ನಡೆದುಬಿಟ್ಟಿದ್ದ. ವಿಧಿಯಿಲ್ಲದೆ ಕವಿತಾ ಮನೆಯವರ ಒತ್ತಾಯಕ್ಕೆ ಮಣಿದು ಮದುವೆಗೆ ಒಪ್ಪಿಕೊಂಡಳು. ರವಿಗೆ ಮದುವೆ invitation ಕೊಡೋಣವೆಂದರೂ ಸಿಗದಾಗ ಬೇಜಾರಾಗಿ ಅತ್ತು ಸುಮ್ಮನಾಗಿದ್ದಳು.

ಇದೆಲ್ಲದರ ನಡುವೆ ವೈಶಾಲಿ-ರವಿಯ ಪ್ರೀತಿ ಹೆಮ್ಮರವಾಗಿ ಬೆಳೆದಿತ್ತು. ಆಗ ವೈಶಾಲಿ ಫೈನಲ್ ಇಯರ್. ರವಿ ಏನೋ ಬಿಸಿನೆಸ್ ಮಾಡ್ತೀನಿ ಅಂತ ಇಡೀ ದಿನ ಶಿರಸಿ ಪೇಟೆ ತಿರುಗಾಡುತ್ತಿದ್ದ. ಬಿಸಿನೆಸ್ ಏನು ಅಂತ ವೈಶಾಲಿ ಕೇಳಲೂ ಇಲ್ಲ ರವಿ ಹೇಳಲೂ ಇಲ್ಲ. ಬಿ‌ಏ ನಂತರ ಎಮ್‌ಏ ಮಾಡಿ ಕನ್ನಡ ಲೆಕ್ಚರರ್ ಆಗಬೇಕೆನ್ನುವುದು ವೈಶಾಲಿ ಚಿಕ್ಕಂದಿನಿಂದಲೂ ಹೆಣೆಯುತ್ತ ಬಂದ ಕನಸು. ರವಿಯ ಒಪ್ಪಿಗೆಯೂ ಸಿಕ್ಕಮೇಲೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಕನ್ನಡ ಎಮ್‌ಏ ಯನ್ನೂ ಮುಗಿಸಿದ್ದಾಯ್ತು. ಆದರೆ ರವಿಯ ಬಿಸಿನೆಸ್ ನದ್ದು ಮಾತ್ರ ಪತ್ತೆಯೇ ಇರಲಿಲ್ಲ. ಶಿರಸಿಯ ಯಾವ ಕಾಲೇಜ್ ನಲ್ಲಿಯೂ ಕನ್ನಡ ಪ್ರಾಧ್ಯಾಪಕರ ಪೋಸ್ಟ್ ಖಾಲಿ ಇಲ್ಲದ ತರುವಾಯ ವೈಶಾಲಿ ಉಡುಪಿಯ ಎಂ.ಜಿ.ಎಂ. ಕಾಲೇಜ್ ಗೆ ಅರ್ಜಿ ಸಲ್ಲಿಸಿದ್ದಳು.ಅದೃಷ್ಟವಶಾತ್ ಅಲ್ಲಿ ಕೆಲಸ ಸಿಕ್ಕಿಯೇ ಬಿಟ್ಟಿತು.

ಆಗಲೇ ಶುರುವಾಗಿತ್ತು ಗೊಂದಲದ ಗೂಡು.ಮದುವೆ ವಯಸ್ಸು ಮೀರುತ್ತಿರುವ ಹುಡುಗಿ ದೂರದ ಉಡುಪಿಗೆ ಹೋಗಿ ಕೆಲಸ ಮಾಡುತ್ತಾಳೆಂದರೆ ಯಾವ ತಂದೆ ತಾಯಿ ತಾನೇ ಒಪ್ಪಿಯಾರು ? ಅಪ್ಪ ಬಿಲ್ಕುಲ್ ಬೇಡ ಅಂದುಬಿಟ್ಟರು. ಆದರೆ ವೈಶಾಲಿಯದ್ದು ಬಿಡದ ಹಠ. ತಾನು ಹೋಗಿಯೇ ತೀರುತ್ತೇನೆಂದು ಹಠ ಹಿಡಿದು ಶಿರಸಿ-ಉಡುಪಿ ಬಸ್ ಹತ್ತಿಯೇ ಬಿಟ್ಟಳು. ಅತ್ತ ಮನೆಯವರ ವಿರೋಧವಾದರೆ ಇತ್ತ ರವಿಗೂ ಇವಳು ಉಡುಪಿಯಲ್ಲಿ ಕೆಲಸ ಮಾಡುವುದು ಸುತಾರಾಂ ಇಷ್ಟವಿರಲಿಲ್ಲ. “ ಇಟ್ಸ್ ಮೈ ವೇ ಆರ್ ಹೈ ವೇ” ವ್ಯಕ್ತಿತ್ವದ ವೈಶಾಲಿಯ ನಿಲುವಿಗೆ ಯಾರ ವಿರೋಧವೂ ಸಾಟಿಯಾಗಲಿಲ್ಲ.
ಎಷ್ಟೆಂದರೂ ಗೊತ್ತಿಲ್ಲದ ಊರಿನಲ್ಲಿ ಒಂಟಿಹೆಣ್ಣು ಪಡಬೇಕಾದ ಕಷ್ಟಗಳಿಗೆ ಲೆಕ್ಕವಿಲ್ಲ. ವೈಶಾಲಿಯೇನು ಇದಕ್ಕೆ ಹೊರತಾಗಲಿಲ್ಲ. ದೊರದ ಸಂಬಂಧಿ ಮಾವನ ಮನೆಯಲ್ಲಿ ಒಂದು ವಾರ ಇದ್ದರೂ ನಂತರ ರೂಂ ಹುಡುಕಲೇ ಬೇಕಾಯಿತು. ಹೊಸ ಜಾಗ, ಹೊಸ ಕೆಲಸ, ಖಾಲಿ ಹೊಟ್ಟೆ ಜೀವನದಲ್ಲಿ ನಮಗೆ ತುಂಬಾ ಪಾಠವನ್ನು ಕಲಿಸುತ್ತದೆ. ಅಪರಿಚಿತರ ನಡುವೆ ಒಂಟಿಯಾಗಿ ಹೋದಳು ವೈಶಾಲಿ.

ಹೀಗಿರುವಾಗ ಒಂದುದಿನ ಕಾಲೇಜಿನ ಬಸ್ ಸ್ಟಾಂಡ್ ನಲ್ಲಿ ಬಸ್ಸಿಗಾಗಿ ಕಾಯುತ್ತಿದ್ದ ವೈಶಾಲಿಗೆ ಕಂಡಿದ್ದು ದೂರದಿಂದ ಕೈಬೀಸುತ್ತಿದ್ದ ರವಿ. ಬರಡು ಭೂಮಿಗೆ ಮಳೆಯ ಸಿಂಚನವಾಗಿತ್ತು. ಮನಸು ಹಕ್ಕಿಯಂತೆ ಹಾರಾಡಿತ್ತು. ಓಡಿಹೋಗಿ ರವಿಯನ್ನು ತಬ್ಬಿಕೊಂಡಳು. ರವಿಯೂ ಅವಳನ್ನು ಬರಸೆಳೆದು ಅಪ್ಪಿಕೊಂಡ. ಉಡುಪಿಯ ಅಪರಿಚಿತರ ನಡುವೆ ತನ್ನನ್ನು ತನ್ನವರನ್ನೇ  ಮರೆತಿದ್ದ ವೈಶಾಲಿಗೆ ಪ್ರೀತಿಯ ಅಪ್ಪುಗೆ ಆಪ್ಯಾಯಮಾನವೆನಿಸಿತ್ತು. ಸೀದಾ ಮಲ್ಪೆ ಬೀಚ್ ಗೆ ಹೋಗಿ ಬಾಯಿ ಮುರಿಯುವಷ್ಟು ಮಾತಾಡಿ, ಅಲ್ಲೇ ಸೂರ್ಯಾಸ್ತದ ಆನಂದ ಸವಿದಿದ್ದರು ಜೋಡಿ ಹಕ್ಕಿಗಳು.

ಪ್ರೀತಿಯಲ್ಲೇ ಮುಳುಗಿದ್ದ ವೈಶಾಲಿಗೆ ರವಿಯ, ತನ್ನ ಭವಿಷ್ಯದ ಬಗ್ಗೆ ಯೋಚನೆಯೇ ಇರಲಿಲ್ಲ. ರವಿ ಜೀವನದಲ್ಲಿ ಏನಾದರೂ ಸಾಧಿಸುತ್ತಾನೆಂಬ ಕುರುಡು ನಂಬಿಕೆ ಅವಳಿಗೆ. ರವಿಗೋ ಅದ್ಯಾವುದರ ಚಿಂತೆಯೇ ಇಲ್ಲ. ರವಿವಾರ ಮನೆಗೆ ಹೋಗಿ ಮದುವೆ ಪ್ರಸ್ತಾಪ ಮಾಡಿದಾಗ ವೈಶಾಲಿಯ ತಂದೆಯ ಕಣ್ಣು ಕೆಂಪಗಾಗಿ ಹಣೆಯಲ್ಲಿ ನೂರು ನೆರಿಗೆ ಮೂಡಿತ್ತು.

ಎಷ್ಟು ಸೊಕ್ಕಾಗಿಕ್ಕು ಕೂಸಿಗೆ, ಎಂಗ ಎಂತ ಸತ್ತು ಹೋಜ್ವನು.. ಅಪ್ಪ ಹೇಳಿ ಒಂದು ಮರ್ಯಾದಿ ಬ್ಯಾಡದ ಹಂಗರೆ.. ಸಲುಗೆ ಕೊಟ್ಟಿದ್ದ ನಾಯಿ ನಸಲು ನೆಕ್ಕಿತ್ತಡ.” ಛಟೀರನೆ ಕೆನ್ನೆಗೊಂದು ಏಟು ಬಾರಿಸಿದ್ದರು.
ಅಪ್ಪಯ್ಯ ನಾನು ಮದುವೆ ಆಗದಿದ್ರೆ ರವಿನೆಯ.. ಇಲ್ದೇ ಇದ್ರೆ ನಂಗೆ ಮದುವೇನೆ ಬ್ಯಾಡಾ..” ಮತ್ತೆ ಹಠ ಹಿಡಿದಿದ್ದಳು ವೈಶಾಲಿ.
ಆ ಪೋಲಿ ರವಿ ಎಂತಾ ಕೆಲಸ ಮಾಡ್ತಾ ಹೇಳಿ ಅವಂಗೆ ಹೆಣ್ಣು ಕೊಡವು ?
“ಒಂದು ದಿನ ಅವಾ ದೊಡ್ಡ ಬಿಸಿನೆಸ್ ಮ್ಯಾನ್ ಆಗಿ ತೋರಸ್ತ ಎಲ್ಲರಿಗುವಾ .“
“ಹ್ಮ ಕನಸು ಕಾಣು ನೀನು.. ಎಂತಾರು ಮಾಡ್ಕ್ಯಂದು ಸಾಯಿ ನೀನು.. ಅಪ್ಪ ದುರುದುರನೆ ಹೊರನಡೆದರು. ಆದರೆ ಎಷ್ಟೆಂದರೂ ಮಗಳಲ್ಲವೇ , ಕೊನೆಗೂ ಮದುವೆಗೆ ಒಪ್ಪಿದ್ದರು.
ರವಿಯ ಮನೆಯಲ್ಲಂತು ಹಬ್ಬದ ವಾತಾವರಣ. ಈ ಪೋಲಿ ರವಿಗೆ ಮದುವೆಯೇ ಆಗಲ್ಲ ಅಂದುಕೊಂಡವರಿಗೆ ಅತ್ಯಾಶ್ಚರ್ಯ.

ಆದರೆ ವೈಶಾಲಿಯ ಕೆಲಸ ಉಡುಪಿಗೆ ಅವಳನ್ನು ಕೈಬೀಸಿ ಕರೆಯುತ್ತಿತ್ತು. ಕೆಲಸವಿಲ್ಲದ ಗಂಡನನ್ನು ಸಾಕುವ ಜವಾಬ್ದಾರಿಯೂ ಇವಳ ಮೇಲಿತ್ತು.
“ನಾನು ಮದುವೆ ನಂತರನೂ ಕೆಲಸ ಮಾಡವನೆಯ ಮತೆ “
“ಅಡ್ಡಿಲ್ಲ್ಯೆ ನಾ ಎಂತಾ ಬ್ಯಾಡಾ ಹೇಳಿದ್ನನೆ.. ನಾನೂ ಉಡುಪಿಯಲ್ಲೇ ಎಂತಾರು ಬಿಸಿನೆಸ್ ಮಾಡ್ತಿ ಬಿಡು.”
ಅಬ್ಬೇಪಾರಿ ಗಂಡ-ಹಠಮಾರಿ ಹೆಂಡತಿ. ಅಂತೂ ಕಥೆಗೆ ಸುಕಾಂತ್ಯ ಸಿಕ್ಕಿತ್ತು.

 


6 ಕಾಮೆಂಟ್‌ಗಳು:

  1. ಹಂ...... ending ಚೋಲೋ ಅನಿಸಿದ್ದಿಲ್ಲೆ ಕಾಣಸ್ತು ???

    ಪ್ರತ್ಯುತ್ತರಅಳಿಸಿ